ಚೆನ್ನು ಕುಣಿತ ಮೇ ತಿಂಗಳ ಹುಣ್ಣಿಮೆಯ ನಂತರ ಐದು, ಏಳು ಅಥವಾ ಒಂಬತ್ತು ದಿನಗಳ ಕಾಲ ಮತ್ತು ಸುಗ್ಗಿಯ ಹುಣ್ಣಿಮೆಯವರೆಗೆ ತುಳುನಾಡಿನ ಮೇರ ಜನಾಂಗದವರು ಮಾಡುವ ನೃತ್ಯವೇ ಚೆನ್ನುನಲಿಕೆ ಅಥಾವ ಚೆನ್ನು ಕುಣಿತ. == ಚೆನ್ನು ವೇಷ == ಚೆನ್ನು ಒಬ್ಬ ಮಹಿಳೆ, ಈ ನೃತ್ಯದಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಸೇರಿ ನೃತ್ಯವನ್ನು ಮಾಡುತ್ತಾರೆ. ಚೆನ್ನು ವೇಷವನ್ನು ಗಂಡಸರೇ ಮಾಡುತ್ತಾರೆ. ಹೆಣ್ಣಿನ ವೇಷ ಹಾಕಿದವರು ಸೀರೆ ಸುತ್ತಿ, ರವಕೆ ಧರಿಸಿ, ತಲೆ ಬಾಚಿ ಸೂಡಿ ಸುತ್ತಿ,ಕೈಗೆ ಬಳೆ, ಕಾಲಿಗೆ ಗೆಜ್ಜೆ, ತಲೆಗೆಕೆದಗೆ ಹೂವು ಧರಿಸುತ್ತಾರೆ. == ಕುಣಿತದ ಕ್ರಮ == ಚೆನ್ನು ತನ್ನ ಕೈಯಲ್ಲಿ ಮಗು ಗೊಂಬೆಯೊಂದಿಗೆ ನೃತ್ಯಗಾರರ ನಡುವೆ ನೃತ್ಯ ಮಾಡುತ್ತಾಳೆ. ಚೆನ್ನು ವೇಷದ ಸುತ್ತಲೂ ಗಂಡಸರೂ ಹೆಂಗಸರೂ ತಮ್ಮ ನಿತ್ಯ ಕೆಲಸ ಮಾಡಲು ಧರಿಸುವ ವಸ್ತ್ರ ಗಳೊಂದಿಗೆ ದುಡಿಯನ್ನು ಬಡಿಯುತ್ತಾ ಚೆನ್ನುವಿನ ಪದ್ಯ ಹೇಳುತ್ತಾ ನಲಿಯುತ್ತಾರೆ. == ಕುಣಿತದ ಹಿನ್ನೆಲೆ == ಇದು ಮಹಿಳೆಗೆ ಸಂಬಂಧಿಸಿದ ಜಾನಪದ ನೃತ್ಯವಾಗಿದೆ. ಧರಣೆ ಪಾಡ್ದನ ಮತ್ತು ಚೆನ್ನು ನಲಿಕೆ ಪದ್ಯಗಳು ಒಂದೇ ಲೆಕ್ಕ ಇರುವುದರಿಂದ ಧರಣೆ ಮತ್ತು ಚೆನ್ನು ಒಂದೇ ಎಂದು ನಂಬಲಾಗಿದೆ. ನೃತ್ಯದ ಸಾಹಿತ್ಯದ ಪ್ರಕಾರ ಧರಣೆಯ ತಂದೆಯನ್ನು ಕೋಟೆಯ ಬಬ್ಬು ಅಂತಾ, ಚೆನ್ನು ಪದ್ಯದಿಂದ ತಿಳಿದು ಬರುತ್ತದೆ. ಧರಣೆಗೆ ಯಾರೂ ಇಲ್ಲದೆ ಆಕೆ ಅನಾಥೆ ಆಗುತ್ತಾಳೆ.ಅವಳಿಗೆ ಗ್ರಾಮದ ಹಿರಿಯರು, ಬಂಟ ಜಾತಿಯವರು, ಮೋಂಟ್ಕಾ ಕಡಪನ ದೆಕ್ಕುರು ಆಶ್ರಯ ನೀಡಿ ಸಾಕುತ್ತಾ ಇದ್ದರು. ಅಲ್ಲಿ, ಹುಡುಗಿ ಹೋಗಿ ಹೆಂಗಸಾದಳು. ಒಂದು ದಿನ ಋತುಮತಿಯಾದ ಚೆನ್ನು ನದಿಯಲ್ಲಿ ಸ್ನಾನ ಮಾಡಲು ಹೋಗಿ , ಹಿಂದೆ ಬರುವಾಗ ಆಲೌಕಿಕ ಗರ್ಭ ಧರಿಸುತ್ತಾಳೆ. ಮದುವೆ ಆಗದೆ ಬಸಿರಾದ ಧರಣೆಯನ್ನು ನೋಡಿ ಊರಿನವರು ಆಶ್ರಯ ಕೊಟ್ಟ ಮೋಂಟ ಕಡ್ಪನ ಮೇಲೆ ಸಂಶಯ ಮಾಡುತ್ತಾರೆ. ಧರಣೆನ ಸತ್ಯಪರೀಕ್ಷೆ ನಡೆಯುತ್ತದೆ.ತಾನು ಸತ್ಯವಂತೆ ನನ್ನನ್ನು ಸಾಕಿದ ದೆಕ್ಕುಲು ನಿರಪರಾಧಿ ಎಂದು ಸಾಬೀತು ಮಾಡಲು ಕೊತ ಕೊತ ಕೊದಿಯುತಿರುವ ಎಣ್ಣೆಗೆ ಧರಣೆ ಕೈಬೆರೆಳು ಹಾಕುವಳು. ಬೆರಳು ಸುಡದೆ ಬೆರಳಿನ ಮೇಲೆ ಇದ್ದ ಎಣ್ಣೆಯನ್ನು ಸಿಟ್ಟಿನಿಂದ ಆಚೆ ಸಿಂಪಡಿಸಿದಾಗ, ಕೋಟೆ ಜರಿದು ಬೀಳುತ್ತದೆ. ಧರಣೆ ಸತ್ಯವಂತೆ ಅಲೌಕಿಕ ತಾಯಿ ಅಂತ ಸಾಬೀತಾಗುತ್ತದೆ. ಧರಣೆ ಮಾಯ ಆಗುತ್ತಾಳೆ. ಅವಳ ನೆನಪಿಗೆ ಚೆನ್ನು ನಲಿಕೆ ಪ್ರಾರಂಭವಾಗಿರಬಹುದು ಎಂದು ನಂಬಿಕೆ. ಚೆನ್ನು ನಲಿಕೆಯಲ್ಲಿ ಹೆಣ್ಣು ವೇಷ ಹಾಕಿ ನಲಿಯುವಾಗ ಕೈಯಲ್ಲಿ ಮಗುವಿನ ರೂಪ ಇರುತ್ತದೆ. ಅದನ್ನು ಆಡಿಸಿಕೊಂಡು ನಲಿಯುತ್ತಾರೆ. == ಕೋಪಾಲ' ಜನಾಂಗ ಮತ್ತು ಕುಣಿತ == ಕಾಸರಗೋಡು ಪ್ರಾಂತ್ಯ ಮತ್ತು ವಿಟ್ಲ ಭಾಗದಲ್ಲಿ 'ಚೆನ್ನು ಕುಣಿತ'-ವನ್ನು 'ಕೋಪಾಲ' ಜನಾಂಗದವರು ನಡೆಸಿಕೊಡುವರು. 'ಚೆನ್ನು' ಎಂಬಾಕೆಯ ಕುರಿತು ಹಾಡುವರು. ಈ ಜನಾಂಗದ ಸಾಂಸ್ಕೃತಿಕ ಮೂಲ ಸ್ತ್ರೀ 'ಚೆನ್ನು' ಎಂಬುದಾಗಿ ಭಾವಿಸಿರುವರು. ಮಾಯಿ ಹುಣ್ಣಿಮೆ ದಿವಸ (ಫೆಬ್ರವರಿ ತಿಂಗಳು) ನಲಿಕೆ ಅಥವಾ ಕೋಪಾಳ ಜನಾಂಗದವರು ಆರಾಧಿಸುವರು. ಕೋಪಾಳ ಜನವರ್ಗದ ಹೆಂಗಸರು (ಎಂಟು-ಹತ್ತು ಜನ) ಕಾಲಿಗೆ ಗೆಜ್ಜೆ ಕಟ್ಟಿ ಎಕ್ಕ ಮಲೆ ಹೂಗಳಿಂದ ಸಿಂಗರಿಸಿಕೊಂಡು ತೆಂಬರೆ ವಾದ್ಯದೊಂದಿಗೆ ಹಾಡುತ್ತಾ ಕುಣಿಯುವರು, ಆ ಬಳಿಕ ಭತ್ತ, ಅಕ್ಕಿ-ಪಡಿಯನ್ನು ಹಾಗೂ ತೆಂಗಿನ ಕಾಯಿ ದಾನವಾಗಿ ಸ್ವೀಕರಿಸುವರು. ಈ ನೃತ್ಯ ಪ್ರಕಾರ ಇಂದು ವಿರಳವಾಗಿದೆ. ಬೆಳ್ತಂಗಡಿ ಭಾಗದಲ್ಲಿ ಮೇರ ಜನವರ್ಗದವರು 'ಚೆನ್ನು' ಕುಣಿತವನ್ನು ದುಡಿ ವಾದ್ಯದೊಂದಿಗೆ ನುಡಿಸುವರು. ವೇಷದ ನೃತ್ಯಗಾರ್ತಿಯು ಕೈಯಲ್ಲಿ ಅಡಕೆ ಹಾಳೆ ಹಿಡಿದುಕೊಂಡಿರುತ್ತಾಳೆ, ಈ ಹಾಳೆಯಲ್ಲಿ ಬಟ್ಟೆಯ ಸಿಂಬೆಯನ್ನು ಮಗುವಿನ ಆಕಾರದಲ್ಲಿ ಇಟ್ಟುಕೊಂಡು ಕುಣಿಯುವಳು, ಚೆನ್ನು -ವಿನ ಜೊತೆಯಲ್ಲಿ ವೇಷ ಭೂಷಣವಿಲ್ಲದೆ ಕುಣಿಯುವ ಹೆಂಗಸರು, ಗಂಡಸರೂ ಇರುತ್ತಾರೆ. ಇವರ ನಡುವೆ ಚೆನ್ನು ವೇಷದಾರಿ ಕುಣಿಯುತ್ತಾನೆ. ಸುತ್ತಲೂ ಐದಾರು ಮಂದಿ 'ದುಡಿ' (ಚರ್ಮ ವಾದ್ಯ) ಬಾರಿಸುತ್ತಾ ಹಾಡು ಹೇಳುತ್ತಾ ಕುಣಿಯುವರು. ಕೆಲವೆಡೆ ಚೆನ್ನು ವೇಷದ ಜೊತೆಯಲ್ಲಿ ಕೊರಗ ವೇಷವೂ ಇರುತ್ತದೆ. == ಚೆನ್ನು ನಲಿಕೆ ಹಾಡು == == ಸಾರಾಂಶ == ತುಳುನಾಡಿನ ಸಂಸ್ಕೃತಿಯ ಪ್ರಮುಖ ಅಂಶವನ್ನೊಳಗೊಂಡ "ಚೆನ್ನುನಲಿಕೆ" ಜನಪದ ಪರಂಪರೆಗಳಲ್ಲಿ ಒಂದು ವಿಶೇಷ ಹಬ್ಬವಾಗಿದೆ. ಈ ಹಬ್ಬದಲ್ಲಿ ಕುಣಿತ, ಹಾಡು, ಮತ್ತು ನೃತ್ಯಗಳ ಮೂಲಕ ಚೆನ್ನುನ ಧಾರ್ಮಿಕ ಹಾಗೂ ಸಾಮಾಜಿಕ ಕಥೆಗಳನ್ನು ಸ್ಮರಿಸುತ್ತಾರೆ. ಚೆನ್ನುನಲಿಕೆಯ ಹಿನ್ನೆಲೆಯು ಪ್ರಾಮಾಣಿಕತೆ, ಶ್ರದ್ಧೆ, ಮತ್ತು ನಂಬಿಕೆಗಳ ಸುತ್ತ ಹೆಣೆಯಲ್ಪಟ್ಟಿದ್ದು, ಧರಣಿಯ ಬಡ ಮಹಿಳೆಯೊಬ್ಬಳು ತನ್ನ ಧೈರ್ಯದಿಂದ ಜಯ ಸಾಧಿಸಿದ ಕಥೆಯನ್ನು ಪ್ರತಿಪಾದಿಸುತ್ತದೆ. ಈ ನಲಿಕೆಯಲ್ಲಿ ಸಮುದಾಯದ ಒಕ್ಕೂಟ, ಸಹಕಾರ, ಮತ್ತು ಸಂಸ್ಕೃತಿಯ ಸಾರವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ. ಇಂದಿಗೂ, ಇಂತಹ ಹಬ್ಬಗಳು ಜನರ ಜೀವನದ ಹೃದಯಭಾಗವಾಗಿದ್ದು, ಆಜ್ಞೆ, ಪ್ರಾಮಾಣಿಕತೆ, ಮತ್ತು ಭಕ್ತಿಯ ಸಂಕೇತವಾಗಿವೆ.